ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಲೇಖನ
Share
2013-14ರಲ್ಲಿ ಯಕ್ಷಗಾನ ರಂಗದಲ್ಲಿ ಆದ ಸಿತ್ಯಂತರಗಳು ಮತ್ತು ಘಟನೆಗಳು

ಲೇಖಕರು :
ಪ್ರೋ.ಎಸ್.ವಿ.ಉದಯ ಕುಮಾರ ಶೆಟ್ಟಿ
ಮ೦ಗಳವಾರ, ಡಿಸೆ೦ಬರ್ 23 , 2014

ಕಳೆದ ಒಂದು ಯಕ್ಷಗಾನೀಯ ವರ್ಷದಲ್ಲಿ ಅಂದರೆ 2013 ನವೆಂಬರ್ ನಿಂದ 2014 ದಶಂಬರ್ ವರೆಗೆ ಕರಾವಳಿಯ ಯಕ್ಷಗಾನ ರಂಗದಲ್ಲಿ ಹಲವಾರು ಸಿತ್ಯಂತರಗಳು ಬದಲಾವಣೆಗಳು ಆಗಿದೆ. ವಿಶೇಷವಾಗಿ ಕೇಳಿ ಬಂದ ಸುದ್ದಿ ಯಕ್ಷಗಾನಕ್ಕೆ ಕಾಲಮಿತಿ ಅನಿವಾರ್ಯವೇ ಎಂಬುದು. ಪೂಜ್ಯ ಹೆಗ್ಗಡೆಯವರ ನೇತೃತ್ವದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಮತ್ತು ಮಂದಾರ್ತಿಯಲ್ಲಿ ಈ ಬಗ್ಗೆ ವಿಶೇಷ ಕಮ್ಮಟಗಳು ಸಹ ನಡೆದವು. ಈ ಲೇಖಕನೂ ಸೇರಿದಂತೆ ಹಲವರು ಇದಕ್ಕೆ ಹಲವಾರು ಕಾರಣ ಕೊಟ್ಟು ಸಾರ ಸಗಟಾಗಿ ವಿರೋಧಿಸಿದರು.

ಧರ್ಮಸ್ಥಳದಲ್ಲಿ ಕಾಲಮಿತಿ ಯಕ್ಷಗಾನದ ಕುರಿತು ಡಾ| ವೀರೇಂದ್ರ ಹೆಗ್ಗಡೆ ನೇತೃತ್ವದಲ್ಲಿ ಸಮಾಲೋಚನೆ ನಡೆಯಿತು. ( ಚಿತ್ರ: ಜನನಿ. ಧರ್ಮಸ್ಥಳ )
ಕಲೆಯ ಸಂಪೂರ್ಣ ಅರಿವಿರದ ಕೆಲವರು ಕಾಲಮಿತಿ ಅನಿವಾರ್ಯ ಅಂದರು. ಹರಕೆ ಬಯಲಾಟದ ದೀವಟಿಗೆ ಬೆಳಕನ್ನು ಅರ್ಧ ರಾತ್ರಿ ಆರಿಸುವುದು ಎಷ್ಟು ಸಮಂಜಸ? ಮದ್ಯ ರಾತ್ರಿ ಮೇಲೆ ಪ್ರೇಕ್ಷಕರು ಹೋಗುವುದೆಲ್ಲಿಗೆ ಎಂಬೆಲ್ಲ ಅಂಶಗಳನ್ನು ಪರಿಗಣಿಸಿ, ಡೇರೆ ಮೇಳಗಳಲ್ಲಿ ಚಾಲ್ತಿ ಇರುವ ಹೊಸ ಪ್ರಸಂಗಗಳನ್ನು ಅರ್ಧ ರಾತ್ರಿ ಮುಗಿಸುವುದು ಕಷ್ಟ ಸಾದ್ಯ ಎಂಬಿತ್ತ್ಯಾದಿ ವಿಷಯಗಳೊಂದಿಗೆ ಕಾಲಮಿತಿಯ ಪ್ರಸ್ತಾಪ ಮೂಲೆ ಗುಂಪಾಯಿತು.

ಮಂದಾರ್ತಿ ಮೇಳಕ್ಕೆ ಕಾಲಮಿತಿಯ ಪ್ರಸ್ತಾಪಕ್ಕೆ ಪ್ರೇಕ್ಷಕ, ಹರಕೆದಾರರ ಒಪ್ಪಿಗೆ ದೊರಯದಾಯಿತು. ಅನಿವಾರ್ಯ ಕಾರಣಕ್ಕೆ ಆಟ ಆಡಿಸಿದವರು ಒಪ್ಪಿದಾಗ ಕೆಲವು ಮೇಳಗಳು ಈ ವರ್ಷ ಕಾಲಮಿತಿ ಪ್ರಯೋಗ ಆಡುತ್ತಿವೆ. ಮಂದಾರ್ತಿ ಮೇಳ ಹರಕೆದಾರರ ಅನುಕೂಲಕ್ಕಾಗಿ ಮಳೆಗಾಲದ ಪ್ರದರ್ಶನದ ನಿರೀಕ್ಷೆಯಲ್ಲಿದ್ದರೂ ಬೇಕಾದಷ್ಟು ಆಟ ಬುಕಿಂಗ್ ಆಗದೆ ಯೋಜನೆ ನೆನೆಗುದಿಗೆ ಬಿದ್ದಿತು.

ಹೊಸ ಮೇಳಗಳು, ಕಲಾವಿದರು:

ಯಕ್ಷಗಾನಕ್ಕೆ ಪ್ರೇಕ್ಷಕರಿಲ್ಲ. ಸುಶಿಕ್ಷಿತ ಜನರು ಯಕ್ಷಗಾನದಿಂದ ದೂರ ಸರಿಯುತ್ತಾರೆ. ಹೊಸ ಬರವಸೆಯ ಕಲಾವಿದರು ತಯಾರಾಗುತ್ತಿಲ್ಲ ಎಂಬ ಕೂಗಿನ ಮುಂದೆ ಹೊಸ ಹೊಸ ಮೇಳಗಳು ಹುಟ್ಟುತ್ತಿವೆ. ಇದರಿಂದ ಕಲಾವಿದರ ಸಂಭಾವನೆಯಲ್ಲಿ ಗಣನೀಯ ಬದಲಾವಣೆ ಆಗಿದ್ದಂತೂ ಸತ್ಯ. ಬಡಗುತಿಟ್ಟಿನಲ್ಲಿ ಈ ವರ್ಷ ಪ್ರಾರಂಭವಾದ ಶ್ರೀ ಕಮಲಶಿಲೆ ಕ್ಷೇತ್ರದ ಹೊಸ ಎರಡನೆ ಮೇಳ, ತೆಂಕಿನಲ್ಲಿ ಹೊಸದಾಗಿ ಈ ವರ್ಷ ಪ್ರಾರಂಭವಾದ ನಾಲ್ಕೂ ಮೇಳಗಳು ಇದನ್ನು ಪುಷ್ಟೀಕರಿಸುತ್ತವೆ. ತೆಂಕಿನ ಕೆಲವು ಕಲಾವಿದರ ಹೆಸರು ತೆಂಕಿನ ಎರಡು ಮೇಳಗಳ ಮತ್ತು ಬಡಗಿನ ಎರಡು ಮೇಳಗಳ ಕರಪತ್ರದಲ್ಲಿ ಅಚ್ಚಾಗಿರುವುದು ಈ ಸಾಲಿನ ವಿಶೇಷ.

ವೃತ್ತಿ ಮೇಳಕ್ಕೆ ವಿದಾಯ ಸಲ್ಲಿಸಿದ ಭಾಗವತ ಸುಬ್ರಮಣ್ಯ ದಾರೇಶ್ವರ
ಮಹತ್ವದ ಬೆಳವಣಿಗೆಯಲ್ಲಿ ನಿರಂತರ 20 ವರ್ಷದಿಂದ ಸೌಕೂರು ಮೇಳದ ಕಲಾವಿದರಾದ ಕೋಡಿ ವಿಶ್ವನಾಥ ಗಾಣಿಗರ ಹಾಲಾಡಿ ಮೇಳ ಸೇರ್ಪಡೆ, ರಾಜ್ಯ ಪ್ರಶಸ್ತಿ ಪುರಸ್ಕ್ರುತ ಐರೋಡಿ ಗೋವಿಂದಪ್ಪನವರ ಗೋಳಿಗರಡಿ ಮೇಳ ಸೇರ್ಪಡೆ, ಬರವಸೆಯ ಯುವ ಕಲಾವಿದ ಮಂಕಿ ಈಶ್ವರ ನಾಯ್ಕರ ಸಾಲಿಗ್ರಾಮ ಮೇಳ ಪ್ರವೇಶ.

ಹತ್ತು ವರ್ಷದಿಂದ ಯಕ್ಷಗಾನಕ್ಕೆ ವಿದಾಯ ಹೇಳಿದ ಮಲ್ಪೆ ವಾಸುದೇವ ಸಾಮಗರ ಸೌಕೂರು ಮೇಳ ಸೇರ್ಪಡೆ ಆಶಾದಾಯಕ ಬೆಳವಣಿಗೆ ಆದರೂ, ಹಿರಿಯ ಕಲಾವಿದರಾದ ಸುಬ್ರಮಣ್ಯ ದಾರೇಶ್ವರ, ಸುರೇಶ ಶೆಟ್ಟಿ. ಬಳ್ಕೂರು ಕೃಷ್ಣಯಾಜಿ, ಹಳ್ಳಾಡಿ ಜಯರಾಮ ಶೆಟ್ಟಿ, ಹೊಸಂಗಡಿ ರಾಜೀವ ಶೆಟ್ಟರು ಕೃಮವಾಗಿ ಪೆರ್ಡೂರು, ಸಾಲಿಗ್ರಾಮ, ಮಂದಾರ್ತಿ ಮೇಳಕ್ಕೆ ವಿದಾಯ ಹೇಳಿ ಕೇವಲ ಅತಿಥಿ ಕಲಾವಿದರಾಗಿ ಕಾಣಿಸಿಕೊಳ್ಳುತ್ತಿರುವುದು ನಿರಾಶಾದಾಯಕ ಬೆಳವಣಿಗೆ. ಕನಿಷ್ಟ ಇನ್ನು ಹತ್ತು ವರ್ಷ ದುಡಿಯಬಲ್ಲ ಯೋಗ್ಯತೆ ಇರುವ ಈ ಕಲಾವಿದರು ಯಕ್ಷಗಾನಕ್ಕೆ ವಿಶೇಷ ಹೆಸರು ಬರುತ್ತಿರುವ ಈ ಕಾಲದಲ್ಲಿ ಅನಿವಾರ್ಯವಾಗಿದ್ದಾರೆ. ಉಳಿದಂತೆ ವಿವಿಧ ಮೇಳಗಳಲ್ಲಿ ಸಣ್ಣ ಪುಟ್ಟ ಬದಲಾವಣೆ ಕಲಾವಿದರಲ್ಲಿ ಮೇಳಗಳಲ್ಲಿ ಆಗಿದೆ.

ಪ್ರಶಸ್ತಿ ಪುರಸ್ಕಾರ ಸನ್ಮಾನ

ಇತ್ತಿಚಿನ ದಿನಗಳಲ್ಲಿ ಯಕ್ಷಗಾನದಲ್ಲಿ ಯೋಗ್ಯರಿಗೆ ಪ್ರಶಸ್ತಿ ಬರುತ್ತಿರುವುದು ಆಶಾದಾಯಕ. ರಾಜ್ಯ ಪ್ರಶಸ್ತಿ ಹೊರತು ಪಡಿಸಿದರೆ ಯಾವುದೇ ಪ್ರಶಸ್ತಿಗೆ ಯಾರು ಅರ್ಜಿ ಹಾಕಿ ಬಂದಿಲ್ಲ ಅನ್ನುವುದು ಗಮನಾರ್ಹ. ಪ್ರಶಸ್ತಿ ಆಯ್ಕೆಯಲ್ಲಿ ಎಲ್ಲಿಯೂ ಸಹ ಯಾರಿಗೂ ಅನ್ಯಾಯ ಆಗಿಲ್ಲ. ಅನರ್ಹರಿಗೂ ಸಿಗಲಿಲ್ಲ ಅನ್ನುವುದು ಸಹ ಮೆಚ್ಚಬೇಕಾದ ಅಂಶ. ಚಾಲ್ತಿ ವರ್ಷದಲ್ಲಿ ನಾಲ್ವರಿಗೆ ಕರ್ನಾಟಕ ರಾಜ್ಯ ಪ್ರಶಸ್ತಿ ಬಂದಿದೆ. ವಂಡ್ಸೆ ನಾರಾಯಣ ಗಾಣಿಗ. ಶೀನಪ್ಪ ಭಂಡಾರಿ, ನೆಲ್ಲಿಕಟ್ಟೆ ನಾರಾಯಣ ಹಾಸ್ಯಗಾರ್, ಗೋಡೆ ನಾರಾಯಣ ಹೆಗಡೆಯವರು ಕಳೆದ 2 ವರ್ಷ ಸಾಲಿನ ಪ್ರಶಸ್ತಿ ಪುರಸ್ಕೃತರು.

  
ಯಕ್ಷಗಾನ ಬಯಲಾಟ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಮಲ್ಪೆ ವಾಸುದೇವ ಸಾಮಗ
ಅಕಾಡೆಮಿ ಪ್ರಶಸ್ತಿ ಪುರಸ್ಕೃತರಲ್ಲಿ ವಿಮರ್ಶಾ ಕ್ಷೇತ್ರದಲ್ಲಿ ಈ ಲೇಖಕನೂ ಸೇರಿದಂತೆ ಎಮ್. ಎ ನಾಯಕ್, ಮಲ್ಪೆ ವಾಸುದೇವ ಸಾಮಗ, ಉದ್ಯಾವರ ಜಯಕುಮಾರ ಗಾಣಿಗ, ಬಂಟ್ವಾಳ ಜಯರಾಮ ಆಚಾರ್ಯರಿಗೆ ಪ್ರತಿಷ್ಟಿತ ಪಾರ್ತಿಸುಬ್ಬ ಪ್ರಶಸ್ತಿಯು ದೊರೆಯಿತು. ಉಡುಪಿ ಯಕ್ಷಗಾನ ಕಲಾರಂಗ ಸಂಸ್ಥೆಯೂ ಸೇರಿದಂತೆ ಹಲವರಿಗೆ ಬೆಂಗಳೂರಿನಲ್ಲಿ ಪ್ರಶಸ್ತಿ ಪ್ರದಾನ ನಡೆಸಿದೆ.

ಸಾಲಿಗ್ರಾಮ ಮೇಳದ ಪಳ್ಲಿ ಸೋಮನಾಥ ಹೆಗಡೆ ಪ್ರಶಸ್ತಿ ಸ್ರೀಪಾತ್ರದಾರಿ ಪುಂಡರೀಕಾಕ್ಷ ಉಪಾದ್ಯಾಯರಿಗೂ, ಶಿರಿಯಾರ ಮಂಜು ನಾಯ್ಕ ಪ್ರಶಸ್ತಿ ಕೋಡಿ ವಿಶ್ವನಾಥ ಗಾಣಿಗರಿಗೂ ಸಂದಿದೆ ಗೋಳಿಗರಡಿ ಮೇಳದ ಚಂದು ಪೂಜಾರಿ ಸ್ಮಾರಕ ಪ್ರಶಸ್ತಿ ಐರೋಡಿ ಗೋವಿಂದಪ್ಪನಿಗೆ ಸಂದಿದೆ. ಹಲವಾರು ಮೇಳಗಳು ಸೇವೆಯ ಪ್ರಾರಂಭದಂದು ಕಲಾವಿದರನ್ನು ಗೌರವಿಸುವ ಪರಿಪಾಟ ಆರಂಬಿಸಿದ್ದು ಒಳ್ಳೆಯ ಬೆಳವಣಿಗೆ.

ಯಕ್ಷಗಾನ ಬಯಲಾಟ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಬಂಟ್ವಾಳ ಜಯರಾಮ ಆಚಾರ್ಯ
ಶ್ರೀ ನೀಲಾವರ ಮೇಳದಲ್ಲಿ ಕುಮ್ಟಾ ಗಣಪತಿ ನಾಯಕ್, ವಿಷ್ಣುಮೂರ್ತಿ ಬಾಸ್ರಿ, ನೀಲಾವರ ರವಿ, ಅಮೃತೇಶ್ವರಿ ಮೇಳದಲ್ಲಿ ಎಂ. ಎ. ನಾಯಕ್ ಮತ್ತು ಹಾರಾಡಿ ಸರ್ವ ಗಾಣಿಗರಿಗೆ, ಮಾರಣಕಟ್ಟೆ ಮೇಳದಲ್ಲಿ ಆಲೂರು ತೇಜ ಮತ್ತು ವಾಸು ಭಟ್ಟರಿಗೆ ಈ ಸಾಲಿನಲ್ಲಿ ಸನ್ಮಾನ ಸಂದಿದೆ. ಮಡಾಮಕ್ಕಿ ಮೇಳಕ್ಕೆ ಈ ವರ್ಷ 25ನೇ ವರ್ಷದ ಬೆಳ್ಳಿ ಹಬ್ಬದ ಸಡಗರದಲ್ಲಿ ಹಲವು ಕಲಾವಿದರಿಗೆ ಅಭಿಮಾನಿಗಳಿಗೆ ಸನ್ಮಾನ ಸಂದಿದೆ. ಕಮಲಶಿಲೆ ಎರಡನೇ ಮೇಳ ವಿದ್ಯುಕ್ತವಾಗಿ ಉದ್ಘಾಟನೆಗೊಂಡು ಕಲಾವಿದರನ್ನೂ ದಾನಿಗಳನ್ನೂ ಸನ್ಮಾನಿಸಲಾಗಿದೆ.

ವಿಶೇಷವಾಗಿ ಗಮನಿಸ ಬೇಕಾದದ್ದು ಕುಂದಾಪುರದ ಭಂಡಾರ್ ಕಾರ್ಸ್ ಕಾಲೇಜು ಸ್ಥಾಪಿಸಿದ್ದ ಯುವ ಬರವಸೆಯ ಕಲಾವಿದರಿಗೆ ನೀಡಲಾಗುವ ಪ್ರಶಸ್ತಿ ನಿರೀಕ್ಷೆಯಂತೆ ತೆಂಕಿನ ಪಟ್ಲ ಸತೀಶ ಶೆಟ್ಟಿ ಮತ್ತು ಮಂಕಿ ಈಶ್ವರ ನಾಯ್ಕರಿಗೆ ದೊರೆತದ್ದು. ಪ್ರತಿಷ್ಟಿತ ಸೀತಾನಧಿ ಪ್ರಶಸ್ತಿ ತೆಂಕಿನ ಭಾಗವತ ದಿನೇಶ ಅಮ್ಮಣ್ಣಾಯರಿಗೆ ದೊರೆತಿದೆ. ದುರಂತದ ವಿಷಯವೆಂದರೆ ಮಂದಾರ್ತಿ ಮೇಳದಲ್ಲಿ ಕೊನೆಯ ದೇವರ ಸೇವೆಯಂದಿ ರೂ. ಒಂದು ಲಕ್ಷ ನಗದಿನೊಂದಿಗೆ ನೀಡಲ್ಪಡುವ ಪ್ರತಿಷ್ಟಿತ ಹಾರಾಡಿ ರಾಮ ಗಾಣಿಗ ಪ್ರಶಸ್ತಿಯನ್ನು ಕಾರಣಾಂತರದಿಂದ ಯಾರಿಗೂ ನೀಡಲಾಗಿಲ್ಲ. ಈ ವರ್ಷ ಪ್ರಾರಂಭದಲ್ಲಿಯಾದರೂ ನೀಡಬಹುದು ಎಂಬ ನಿರೀಕ್ಷೆಯೂ ಸುಳ್ಳಾಯಿತು. ಮಂದಾರ್ತಿಯಂತಹ ಕ್ಷೇತ್ರದಲ್ಲಿ ಇಂತಹ ಘಟನೆಯನ್ನು ಯಾರೂ ನಿರೀಕ್ಷಿಸಿರಲಿಲ್ಲ.

ಮೇಳಗಳು ಮತ್ತು ನೂತನ ಪ್ರಸಂಗಗಳು

ಶ್ರೀ ಧರ್ಮಸ್ಥಳ, ಕಟೀಲು, ಮಂದಾರ್ತಿ ಮಾರಣಕಟ್ಟೆ ಕಮಲಶಿಲೆ ಮೇಳಗಳು ತಮ್ಮ ಪ್ರದರ್ಶನಗಳಲ್ಲಿ ಕೇವಲ ಪೌರಾಣಿಕ ಪ್ರಸಂಗವನ್ನು ಪ್ರದರ್ಶಿಸಿದರೆ. ಉಳಿದ ಮೇಳಗಳು ಪೌರಾಣಿಕ ಮತ್ತು ಹೊಸ ಪ್ರಸಂಗ ಪ್ರದರ್ಶಿಸುತ್ತಿವೆ. ಪ್ರಮುಖ ಎರಡು ಡೇರೆ ಮೇಳಗಳಾದ ಸಾಲಿಗ್ರಾಮ ಮತ್ತು ಪೆರ್ಡೂರು ಮೇಳಗಳು ಕ್ರಮವಾಗಿ ಧೀಶಕ್ತಿ ಮತ್ತು ಗಗನತಾರೆ ಎಂಬ ನೂತನ ಪ್ರಸಂಗದೊಂದಿಗೆ ನಾಗಾಲೋಟದಲ್ಲಿ ಸಾಗುತ್ತಿದೆ. ಗೋಳಿಗರಡಿ ಮೇಳ ಪಂಚದೈವ ಪ್ರತಾಪ, ಹಿರಿಯಡ್ಕ ಮೇಳ ಇಂಜಿನೀಯರಿಂಗ್ ವಿದ್ಯಾರ್ಥಿಯೊಬ್ಬರ ದೈವಗಳ ಆದಾರಿತ ಗುಳಿಗೋದ್ಭವ-ಪಂಜೂರ್ಲಿ ಪ್ರತಾಪ, ಮಡಾಮಕ್ಕಿ ಮೇಳ ದೈವ ಸಂಕಲ್ಪ ಸಿಗಂದೂರು ಮೇಳ ಬಸ್ರೂರು ಕ್ಷೇತ್ರ ಮಾಹತ್ಮೆ, ವಕ್ವಾಡಿ ಕ್ಷೇತ್ರ ಮಹಾತ್ಮೆ ಮುಂತಾದ ಪ್ರಸಂಗ ಪ್ರದರ್ಶಿಸುತ್ತಿವೆ. ವಿವಿಧ ಮೇಳಗಳ ಕೂಡಾಟಗಳು ಯಾವ ಸಂಘರ್ಷನೆಯಿಲ್ಲದೆ ನಡೆದರೂ ಜೋಡಾಟಗಳ ಪ್ರಯೋಗ ಅಪರೂಪವಾಗುತ್ತಿವೆ.

ಯಕ್ಷರಂಗಕ್ಕೆ ವಿಲಕ್ಷಣ ಸುದ್ದಿಯ ಆಘಾತ

   
ಅಗಲಿದ ಗಣ್ಯರು - ಡಾ/ ವೈ ಚಂದ್ರಶೇಖರ ಶೆಟ್ಟಿ, ಸಿಧ್ಧಕಟ್ಟೆ ಚೆನ್ನಪ್ಪ ಶೆಟ್ಟಿ
ಯಕ್ಷಗಾನ ರಂಗದಲ್ಲಿ ಪ್ರಚಲಿತವಿದ್ದ ಹಾಸ್ಯ ಘಟನೆಗೆ ನೈಜ ಬಣ್ಣ ಹಚ್ಚಿ ಪ್ರಮುಖ ಸುದ್ದಿ ಪತ್ರಿಕೆಯೊಂದು ಮುಖ್ಯ ಪುಟದಲ್ಲಿ ಸುದ್ದಿ ಪ್ರಸಾರ ಮಾಡಿದ್ದು, ಜನರು ಅದನ್ನು ನಂಬಿದ್ದು, ಯಕ್ಷಗಾನ ರಂಗದಲ್ಲಿ ಕಳೆದ ವರ್ಷ ನೆಡೆದ ಆಘಾತಕಾರಿ ಘಟನೆ. ಚೌಕಿಯಲ್ಲಿ ಹಾಸ್ಯಕ್ಕೋಸ್ಕರ 50 ವರ್ಷದಿಂದ ಪ್ರಚಲಿತವಿದ್ದ ಮಹಿಷಾಸುರನ ರಿಕ್ಷಾ ಪ್ರಕರಣವನ್ನು ನಿನ್ನೆ ತಾನೇ ನಡೆದ ಘಟನೆ ಎಂದು ಬಿಂಬಿಸಿ ಪ್ರಕಟಿಸಿದ್ದು ಕಲಾವಿದರಿಗೆ ನೋವು ತಂದಿತ್ತು. ಅಂತಹ ಪ್ರಕರಣ ಈ ಹಿಂದೆಯೂ ನಡೆದ ದಾಖಲೆ ಇಲ್ಲ. ಇದರ ಬಗ್ಗೆ ಅಲ್ಲಲ್ಲಿ ಪ್ರತಿಭಟನೆ ಮಾತ್ರವಲ್ಲದೆ, ಉಡುಪಿ ರಾಜಾಂಗಣದಲ್ಲಿ ನಡೆದ ಕಲಾವಿದರ ಸಮ್ಮೇಳನದಲ್ಲೂ ಉಗ್ರ ಪ್ರತಿಭಟನೆ ಕಲಾವಿದರಿಂದ ವ್ಯಕ್ತವಾಯಿತು. ಎಲ್ಲ ಮೇಳಗಳ ಮಹಿಸಾಸುರ ಪಾತ್ರಧಾರಿಗಳು ಅನಾವಶ್ಯಕ ನೋವನ್ನು ಅನುಭವಿಸುವಂತಾಯಿತು.

ಅಗಲಿದ ಗಣ್ಯರು ಮಾನ್ಯರು:

ಯಕ್ಷರಂಗದ ಖ್ಯಾತ ಪ್ರಸಂಗಕರ್ತ ಡಾ/ ವೈ ಚಂದ್ರಶೇಖರ ಶೆಟ್ಟಿ, ಹಿರಿಯ ಕಲಾವಿದರಾದ ಕುಂಜಾಲು ರಾಮಕೃಷ್ಣ, ಕಟೀಲು ಪುರುಶೋತ್ತಮ ಭಟ್, ಕಮ್ಮರಡಿ ನಾಗೇಶ ಮಡಿವಾಳ ಇವರ ಅಗಲುವಿಕೆ ತುಂಬಲಾರದ ನಷ್ಟ. ತೆ೦ಕು ಹಾಗೂ ಬಡಗು ಮೇಳಗಳಲ್ಲಿ ಸೇವೆ ಸಲ್ಲಿಸಿ, ತಾಳಮದ್ದಳೆಯ ಬಹು ಬೇಡಿಕೆಯ ಸಜ್ಜನ ಕಲಾವಿದ ಸಿಧ್ಧಕಟ್ಟೆ ಚೆನ್ನಪ್ಪ ಶೆಟ್ಟಿಯವರ ಅಕಾಲಿಕ ಮರಣವನ್ನು ಜೀರ್ಣಿಸುವುದು ಎಲ್ಲಾ ಕಲಾಭಿಮಾನಿಗಳಿಗೂ ಕಷ್ಟಕರವಾಯಿತು

ಪ್ರೇಕ್ಷಕರು ಮತ್ತು ಯಕ್ಷಗಾನ:

ಕಳೆದ ಕೆಲವು ವರ್ಷದಿಂದ ಯಕ್ಷಗಾನಕ್ಕೆ ಹೊಸ ಹೊಸ ಪ್ರೇಕ್ಷಕರು ಬರುತಿದ್ದಾರೆ. ಮಹಿಳೆಯರು ಯುವ ಪ್ರೇಕ್ಷಕರು ಹೆಚ್ಚಾಗಿ ಕಾಣುತ್ತಿರುವುದು ಆಶಾದಾಯಕ ಬೆಳವಣಿಗೆ. ರಾಜಧಾನಿ ಬೆ೦ಗಳೂರಿನಲ್ಲಿ ಯಕ್ಷಗಾನ ಪ್ರದರ್ಶನಗಳ ಸ೦ಖ್ಯೆ ಗಣನೀಯವಾಗಿ ಏರಿಕೆಯಾಗಿರುವುದು ಕಲಾಭಿಮಾನಿಗಳಿಗೆ ಹಾಗೂ ಕಲಾವಿದರಿಗೆ ಸ೦ತಸದ ವಿಷಯ.




Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
Chandra Achar(12/24/2014)
ಶುಭ ವಂದನೆಗಳೊಂದಿಗೆ, ಈ ಅಂತಜಾ೯ಲದಲ್ಲಿ ಉತ್ತಮ ಲೇಖನ ಪ್ರಸಾರವಾಗುತ್ತಿರುವುದು ತುಂಬಾ ಖುಷಿ ತಂದಿದೆ.ಎಲ್ಲಾ ಮಾಹಿತಿಗಳು ಪ್ರಕಟವಾದುದು ಯಕ್ಷಗಾನದಲ್ಲಿ ಉತ್ತಮ ಬೆಳವಣಿಗೆ.




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ